ನಾಡು ಬಾದಾಮಿ -
ಕಾಂಬ್ರಿಟೇಸೀ ಕುಟುಂಬಕ್ಕೆ ಸೇರಿದ ವನ್ಯವೃಕ್ಷ. ಬಿಳಿಮತ್ತಿ, ತಾರೇಮರ, ಹೊನಾಲ್, ಅಳಲೇಕಾಯಿಮರ-ಇವುಗಳ ಹತ್ತಿರ ಸಂಬಂಧಿ. ಟರ್ಮಿನೇಲಿಯ ಕಟಪ್ಪ ಇದರ ಶಾಸ್ತ್ರೀಯ ನಾಮ. ಇದು ಏಷ್ಯದ ಉಷ್ಣವಲಯದ ಮೂಲನಿವಾಸಿ. ಇದನ್ನು ಭಾರತ, ಮಲಕಸ್ ಮತ್ತು ಅಂಡಮಾನ್ ದ್ವೀಪಗಳಲ್ಲಿ ಕಾಣಬಹುದು.

	ಇದು 10-20 ಮೀ. ಎತ್ತರಕ್ಕೆ ಬೆಳೆಯುವ ಮಧ್ಯಮಗಾತ್ರದ ಮರ; ಛತ್ರಿಯಾಕಾರದಲ್ಲಿ ಹರಡಿಕೊಂಡು ಬೆಳೆಯುತ್ತದೆ. ಎಲೆಗಳು ಸರಳ; ಇವುಗಳ ಉದ್ದ ಸುಮಾರು 18 ಸೆಂ.ಮೀ. ಅಗಲ 8 ಸೆಂ.ಮೀ. ಆಕಾರ ಅಂಡದಂತೆ. ವರ್ಷಕ್ಕೊಮ್ಮೆ ಎಲೆಗಳು ಉದುರುವುವು. ಉದುರುವ ಮುನ್ನ ನೇರಳೆಗೆಂಪು ಬಣ್ಣವನ್ನು ತಳೆಯುವುವು. ಪುನಃ ಜುಲೈ-ಆಗಸ್ಟ್ ತಿಂಗಳ ವೇಳೆಗೆ ಹೊಸ ಎಲೆಗಳು ಚಿಗುರುವುವು. ಜೊತೆಯಲ್ಲಿ ಹೂಗಳು ಸಹ ಅರಳುವುವು. ಕಾಯಿಗಳು ಸ್ವಲ್ಪ ಚಪ್ಪಟೆಯಾದವೂ ಅಂಡಾಕಾರವೂ ಆಗಿವೆ. ಕಾಯಿಯ ಉದ್ದ 4-5 ಸೆಂ.ಮೀ. ಇದಕ್ಕೆ ಎರಡು ರೆಕ್ಕೆಗಳಿವೆ.

	ನಾಡುಬಾದಾಮಿ ಮರವನ್ನು ಬೀಜಗಳಿಂದ ವೃದ್ಧಿಸಲಾಗುತ್ತದೆ. ನಾಡು ಬಾದಾಮಿಯನ್ನು ತಿನ್ನುವುದುಂಟು. ಇದರಿಂದ ಗೋಂದನ್ನು ಪಡೆಯಬಹುದು. ತೊಗಟೆ ಮತ್ತು ಎಲೆಯನ್ನು ಬದ್ಧಕವಾಗಿ ಉಪಯೋಗಿಸಲಾಗುತ್ತದೆ. ಹಣ್ಣಿನ ತಿರುಳಿನಿಂದ ಎಣ್ಣೆಯನ್ನು ತಯಾರಿಸುತ್ತಾರೆ. ಎಲೆಗಳನ್ನು ಕಜ್ಜಿ ಚಿಕಿತ್ಸೆಗೆ ಬಳಸಲಾಗುತ್ತದೆ. ಈ ಮರವನ್ನು ಉದ್ಯಾನವನಗಳಲ್ಲಿ ಅಲಂಕಾರಕ್ಕಾಗಿ ಬೆಳೆಸುವುದುಂಟು.
(ಎಸ್.ಐ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ